ಚಾಣಕ್ಯ ನೀತಿ , ಶ್ಲೋಕ- 6

|| ಆಪದರ್ಥೇ ಧನಂ ರಕ್ಷೇತ್ ಶ್ರೀಮತಾಂ ಆಪದಃ ಕುತಃ |
ಕದಾಚಿತ್ ಚಲತೇ ಲಕ್ಷ್ಮೀಃ ಸಂಚಯೋಪಿ ವಿನಶ್ಯತಿ ||

ಆಪತ್ಕಾಲದಲ್ಲಿ ಪ್ರಯೋಜನಕ್ಕೆ ಬರಲೆಂದು ಹಣವನ್ನು ಕೂಡಿಟ್ಟುಕೊಳ್ಳಬೇಕು. ಆದರೆ ಶ್ರೀಮಂತರಿಗೆ ಆಪತ್ಕಾಲ ಹೇಗೆ ತಾನೆ ಬರುವುದೆಂದು ಯೋಚಿಸಬಾರದು. ಲಕ್ಷ್ಮಿಯು ಚಂಚಲೆಯಾಗಿರುವುದರಿಂದ ಒಂದುವೇಳೆ ಆಕೆಯು ಹೊರಟುಹೋದರೆ? ಆಗ ಕೂಡಿಟ್ಟ ಹಣವೂ ಹೊರಟುಹೋಗುವುದಲ್ಲವೇ? ಆದರೂ ಹಣವನ್ನು ಸಂಗ್ರಹಿಸಿ ಇಡುವುದು ಒಳ್ಳೆಯದು, ಇದರಿಂದ ಆಪತ್ಕಾಲದಲ್ಲಿ ಸಾಲಮಾಡುವುದು ತಪ್ಪುತ್ತದೆ ಮತ್ತು ಬೇರೆಯವರ ಹಂಗು ಇರುವುದಿಲ್ಲ

ಚಾಣಕ್ಯ ನೀತಿ , ಶ್ಲೋಕ- 5

|| ಆಪದರ್ಥೇ ಧನಂ ರಕ್ಷೇತ್ ದಾರಾನ್ ರಕ್ಷೇತ್ ಧನೈರಪಿ |
ಆತ್ಮಾನಂ ಸತತಂ ರಕ್ಷೇತ್ ದಾರೈರಪಿ ಧನೈರಪಿ ||

ಆಪತ್ಕಾಲದಲ್ಲಿ ಉಪಯೋಗಕ್ಕೆ ಬರಲೆಂದು ಹಣವನ್ನು ಉಳಿತಾಯ ಮಾಡಬೇಕು, ಧನಸಂಪತ್ತಿಗಿಂತಲೂ ಹೆಚ್ಚಾಗಿ ಹೆಂಡತಿಯನ್ನು ಕಾಪಾಡಿಕೊಳ್ಳಬೇಕು, ಆದರೆ ಧನಸಂಪತ್ತು ಹಾಗೂ ಹೆಂಡತಿಗಿಂತ ಹೆಚ್ಚಾಗಿ ತನ್ನನ್ನು ತಾನು ಕಾಪಾಡಿಕೊಳ್ಳಬೇಕು

ಚಾಣಕ್ಯ ನೀತಿ, ಶ್ಲೋಕ- 4

|| ದುಷ್ಟಭಾರ್ಯಾ ಶಠ ಮಿತ್ರಂ ಭೃತ್ಯಶ್ಚೋತ್ತರದಾಯಕಃ |
ಸಸರ್ಪೇ ಚ ಗೃಹೇ ವಾಸಃ ಮೃತ್ಯುರೇವ ನ ಸಂಶಯಃ||

ದುಷ್ಟಸ್ವಭಾವದ ಪತ್ನಿಯೊಡನೆ ಸಂಸಾರ ಮಾಡುವುದರಿಂದ, ವಂಚಕನಾದ ಮಿತ್ರನ ಸಹವಾಸ, ಏನೇ ಹೇಳಿದರೂ ಅದಕ್ಕೆ ವಿರುದ್ದವಾಗಿ ಉತ್ತರಿಸುವ ಸೇವಕ ಹಾಗೂ ಹಾವು ಸೇರಿಕೊಂಡಿರುವ ಮನೆಯಲ್ಲಿ ವಾಸಮಾಡುವುದರಿಂದ ಮರಣಪ್ರಾಪ್ತಿಯಾಗುವುದರಲ್ಲಿ ಸಂಶಯವಿಲ್ಲಾ.

ಚಾಣಕ್ಯ ನೀತಿ, ಶ್ಲೋಕ-3

|| ಮೂರ್ಖಶಿಷ್ಯೋಪದೇಶೇನ ದುಷ್ಟಸ್ತ್ರೀಭರಣೇನ ಚ |
ದುಃಖಿತೈಃ ಸಂಪ್ರಯೋಗೇನ ಪಂಡಿತೋಪಿ ಅವಸೀದತಿ ||

ಮೂರ್ಖರಾಗಿರುವ ಶಿಷ್ಯರಿಗೆ ಪಾಠ ಮಾಡುವುದರಿಂದ, ದುಷ್ಟ ಸ್ವಭಾವದ ಹೆಂಗಸಿನ ಜೊತೆ ಸಂಸಾರಮಾಡುವುದರಿಂದ, ದುಃಖದಲ್ಲಿರುವವರ ಒಡನಾಟದಿಂದ, ಪಂಡಿತನೂ ನಾಶವಾಗುತ್ತಾನೆ.

ಚಾಣಕ್ಯ ನೀತಿ, ಶ್ಲೋಕ- 2

**ಚಾಣಕ್ಯ ನೀತಿ**
ಮೊದಲನೆಯ ಅಧ್ಯಾಯ
ಶ್ಲೋಕ-2

|| ಅಧಿತ್ಯೇದಂ ಯಥಾ ಶಾಸ್ತ್ರಂ ನರೋ ಜಾನಾತಿ ಸತ್ತಮಃ |
ಧರ್ಮೋಪದೇಶವಿಖ್ಯಾತಂ ಕಾರ್ಯಕಾರ್ಯೇ ಶುಭಾಶುಭೇ ||

ಎಲ್ಲಾ ಶಾಸ್ತ್ರಗ್ರಂಥಗಳನ್ನು ಅಧ್ಯಯನ ಮಾಡುವಂತೆಯೇ ಧರ್ಮೋಪದೇಶವನ್ನು ನೀಡುವ ಈ ನೀತಿಶಾಸ್ತ್ರವನ್ನೂ ಅಧ್ಯಯನ ಮಾಡಿದರೆ ಮನುಷ್ಯನು ಒಳ್ಳೆಯ ಕಾರ್ಯ, ಅಶುಭಕಾರ್ಯಗಳಲ್ಲಿ ಹಾಗೂ ಶುಭ ಮತ್ತು ಅಶುಭ ಸಂದರ್ಭಗಳಲ್ಲಿ ಯಾವುದನ್ನು ಮಾಡಿದರೆ ಅದು ಶುಭಪ್ರದವಾಗುವುದು ಎಂಬುದನ್ನು ತಿಳಿಯಬಹುದು.

ಚಾಣಕ್ಯ ನೀತಿ, ಶ್ಲೋಕ- 1

                              **ಚಾಣಕ್ಯ ನೀತಿ**
                          ಮೊದಲನೆಯ ಅಧ್ಯಾಯ
                                 *ಶ್ಲೋಕ- 1*

|| ಪ್ರಣಮ್ಯ ಶಿರಸಾ ವಿಷ್ಣುಂ ತ್ರೈಲೋಕ್ಯಾಧಿಪತಿಂ ಪ್ರಭುಮ್ |
ನಾನಾಶಾಸ್ತ್ರೋದ್ಧೃತಂ ವಕ್ಷ್ಯೇ ರಾಜನೀತಿಸಮುಚ್ಚಯಮ್ ||

ತ್ರಿಲೋಕಗಳಿಗೆ ಅಧಿಪತಿಯಾಗಿರುವ ಶ್ರೀ ಮಹಾವಿಷ್ಣುವಿಗೆ ತಲೆಬಾಗಿ ನಮಸ್ಕರಿಸಿ, ಅನೇಕ ಪ್ರಾಚೀನ ಶಾಸ್ತ್ರಗಳಿಂದ ಸಂಗ್ರಹಿಸಿ ತೆಗೆದ ರಾಜನೀತಿಯನ್ನು ತಿಳಿಸುವ ಸಂಗ್ರಹವನ್ನು ಈಗ ನಾನು ಹೇಳುವೆನು.
ರಾಜನೀತಿಯ ಪಂಡಿತನೂ, ವಿನಯವಂತನೂ ಆದ ಚಾಣಕ್ಯನು ಈ ಗ್ರಂಥದ ಆರಂಭದಲ್ಲಿ ಬ್ರಹ್ಮಾಂಡದ ನಾಯಕನಾದ ಶ್ರೀಮಹಾವಿಷ್ಣುವಿಗೆ ಭಕ್ತಿಯಿಂದ ನಮಸ್ಕರಿಸಿ ರಾಜನೀತಿಯನ್ನು ಹೇಳಲು ಆರಂಭಿಸಿದನು, ಪುರಾಣಗಳಿಂದ ಸಂಗ್ರಹಿಸಿದ ಶ್ಲೋಕಗಳ ಸಂಗ್ರಹದ ಮೂಲಕ ರಾಜನೀತಿಯನ್ನು ಹೇಳುತ್ತಿರುವುದಾಗಿ ಇಲ್ಲಿ ಸ್ಪಷ್ಟಪಡಿಸಿರುವನು.